ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತು 2010ರಲ್ಲಿ ಅಲಹಾಬಾದ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಕುರಿತು ಸುಪ್ರೀಂ ಕೋರ್ಟ್ ಶನಿವಾರ ಐತಿಹಾಸಿಕ ತೀರ್ಪು ನೀಡಿದೆ.ನ್ಯಾಯಾಲಯದಲ್ಲಿ ಇಷ್ಟು ವರ್ಷಗಳ ಕಾಲ ನಡೆದ ಹೋರಾಟದ ಸುದೀರ್ಘ ವಿವರ ಇಲ್ಲಿದೆ:
1528: ಮೊಘಲ್ ಸಾಮ್ರಾಟ್ ಬಾಬರನ ಕಮಾಂಡರ್ ಮಿರ್ ಬಕಿಯಿಂದ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣ.
1885; ಮಹಂತ್ ರಘುವೀರ್ ದಾಸ್ ಫೈಜಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮಸೀದಿಯ ಪಕ್ಕದಲ್ಲಿ ಗೋಪುರ ನಿರ್ಮಾಣಕ್ಕೆ ಮನವಿ, ಅರ್ಜಿ ತಿರಸ್ಕೃತ.
1859- ವಿವಾದಿತ ಸ್ಥಳವನ್ನು ಹಿಂದೂ-ಮುಸ್ಲಿಂಮರಿಗೆ ಹಂಚಿಕೆ ಮಾಡಿ ಪ್ರಾರ್ಥನೆ ಹಾಗೂ ದೇವಾರಾಧನೆಗೆ ಅವಕಾಶ ಮಾಡಿಕೊಟ್ಟ ಬ್ರಿಟಿಶ್ ಸರ್ಕಾರ
1949 - ವಿವಾದಿತ ಸ್ಥಳದಲ್ಲಿ ಮಸೀದಿಯ ಕೇಂದ್ರ ಗುಮ್ಮಟದೊಳಗೆ ರಾಮಲಲ್ಲಾನ ವಿಗ್ರಹಗಳ ಪ್ರತಿಷ್ಠಾಪನೆ.
1950: ಗೋಪಾಲ್ ಸಿಮ್ಲಾ ವಿಶಾರದ್ ಮತ್ತು ಪರಮಹಂಸ ರಾಮಚಂದ್ರ ದಾಸ್ ಫೈಜಾಬಾದ್ ಕೋರ್ಟ್ ನಲ್ಲಿ ಎರಡು ದಾವೆ ಸಲ್ಲಿಸಿ ಮಸೀದಿಯಲ್ಲಿ ಮೂರ್ತಿ ಆರಾಧನೆಗೆ ಅನುಮತಿ ಕೋರಿ ಮನವಿ ಸಲ್ಲಿಕೆ,
1959 - ವಿವಾದಿತ ಜಾಗದ ಸ್ವಾಧೀನ ಕೋರಿ ನಿರ್ಮೋಹಿ ಅಖಾಡದಿಂದ ಅರ್ಜಿ ಸಲ್ಲಿಕೆ
1961- ವಿವಾದಿತ ಸ್ಥಳ ನಮ್ಮದು ಎಂದು ನ್ಯಾಯಾಲಯದ ಮೊರೆ ಹೋದ ಸುನ್ನಿ ವಕ್ಫ್ ಮಂಡಳಿ
1981: ಉತ್ತರ ಪ್ರದೇಶದ ಸುನ್ನಿ ಕೇಂದ್ರ ವಕ್ಫ್ ಬೋರ್ಡ್ ಸ್ಥಳದ ಸ್ವಾಧೀನ ಕೋರಿ ಅರ್ಜಿ, ಮಸೀದಿಯಿಂದ ಮೂರ್ತಿ ತೆಗೆಯುವಂತೆ ಕೋರಿ ಮನವಿ.
1986 - ವಿವಾದಗ್ರಸ್ತ ಜಾಗದಲ್ಲಿ ಹಿಂದೂಗಳ ಪೂಜೆಗೆ ಅನುವು ಮಾಡಿಕೊಡುವಂತೆ ಸ್ಥಳೀಯ ನ್ಯಾಯಾಲಯ ಆದೇಶ.
1989: ವಿವಾದಗ್ರಸ್ತ ಜಾಗದ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ.
1990- ವಿವಾದಿತ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಲಾಲ್ ಕೃಷ್ಣ ಅದ್ವಾಣಿ ನೇತೃತ್ವದಲ್ಲಿ ಬಿಜೆಪಿಯಿಂದ ರಥಯಾತ್ರೆ
1992, ಡಿ.6: ಬಾಬ್ರಿ ಮಸೀದಿ ಧ್ವಂಸ.
1993: ವಿವಾದಿತ ಜಾಗವನ್ನು ಕೇಂದ್ರ ಸ್ವಾಧೀನಪಡಿಸಿಕೊಳ್ಳುವುದಕ್ಕಾಗಿ 'ಅಯೋಧ್ಯೆ ನಿರ್ದಿಷ್ಟ ಪ್ರದೇಶದ ಸ್ವಾಧೀನ ಕಾಯಿದೆ' ಅಂಗೀಕಾರ. ಇದಕ್ಕೆ ಇಸ್ಮಾಯಿಲ್ ಫಾರೂಕಿ ಸೇರಿದಂತೆ ಹಲವರಿಂದ ತಕರಾರು ಅರ್ಜಿ.
2002: ಜಾಗದ ಒಡೆತನ ಯಾರಿಗೆ ಸೇರಿದ್ದು ಎನ್ನುವ ವ್ಯಾಜ್ಯ ಕುರಿತು ಅಲಹಾಬಾದ್ ಹೈಕೋರ್ಟ್ ವಿಚಾರಣೆ ಆರಂಭ.
2010: ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮ್‌ಲಲ್ಲಾ ಮೂರೂ ವಾರಸುದಾರರಿಗೆ ವಿವಾದಿತ ಜಾಗದ ಸಮಾನ ಹಂಚಿಕೆ ಮಾಡಿ ತೀರ್ಪು.
2011: ಅಯೋಧ್ಯೆ ಭೂ ವಿವಾದ ಕುರಿತ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ.
2017: ಪರಸ್ಪರ ಸಂಧಾನ ಸಮ್ಮತಿ ಮೂಲಕ ವ್ಯಾಜ್ಯ ಇತ್ಯರ್ಥ ಪಡಿಸಿಕೊಳ್ಳಲು ಸಿಜೆಐ ಜೆ.ಎಸ್. ಖೇಹರ್ ಸಲಹೆ.
2017: ಅಲಹಾಬಾದ್ ಹೈಕೋರ್ಟ್‌ನ 1994ರ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ತ್ರಿಸದಸ್ಯ ಪೀಠ ರಚನೆ.
2018: ತನ್ನ 1994ರ ತೀರ್ಪಿನ ಮರು ಪರಿಶೀಲನೆ ಕೋರಿದ ಅರ್ಜಿಗಳ ವಿಚಾರಣೆಯನ್ನು 5 ಸದಸ್ಯರ ವಿಸ್ತೃತ ಪೀಠಕ್ಕೆ ಒಪ್ಪಿಸಲು ಕೋರಿ ರಾಜೀವ್ ಧವನ್ ಅವರಿಂದ ಅರ್ಜಿ.
2019: ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಯ ಯತ್ನ ವಿಫಲ. ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದಿಂದ ನಲವತ್ತು ದಿನಗಳ ಕಾಲ ವಿಚಾರಣೆ
2019: ನವೆಂಬರ್ 9 - ಅಯೋಧ್ಯೆ ಅಂತಿಮ ತೀರ್ಪು ಪ್ರಕಟ, ವಿವಾದಿತ ಭೂಮಿ ರಾಮಲಲ್ಲಾ ಪಾಲು, ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ.
ಅಯೋಧ್ಯೆ ಮಹಾತೀರ್ಪು ನೀಡಿರುವ ಸಂವಿಧಾನ ಪೀಠದ ಐವರು ನ್ಯಾಯಮೂರ್ತಿಗಳ ಸಂಕ್ಷಿಪ್ತ ವಿವರ:~
ಶತಮಾನಗಳಿಗೂ ಹೆಚ್ಚು ಕಾಲದ ರಾಮಜನ್ಮಭೂಮಿ ವಿವಾದಕ್ಕೆ ಇಂದು ತೆರೆ ಕಂಡಿದೆ.ಇತಿಹಾಸಕ್ಕೆ ಹೊಸದೊಂದು ಅಧ್ಯಾಯವೇ ಸೇರ್ಪಡೆಯಾಗಿದೆ. ಸುದೀರ್ಘ ಕಾಲದವರೆಗೆ ನಿಷ್ಪಕ್ಷಪಾತ ವಿಚಾರಣೆ ನಡೆಸಿದ ನ್ಯಾಯಪೀಠ ಐವರು ನ್ಯಾಯಮೂರ್ತಿ ಗಳಿಗೆ ಈ ಶ್ರೇಯಸ್ಸು ಸಲ್ಲಬೇಕು. ಅಯೋಧ್ಯೆ ತೀರ್ಪು ನೀಡಿರುವ ಸಂವಿಧಾನಪೀಠದ ಐವರು ನ್ಯಾಯಮೂರ್ತಿಗಳ ಕಿರುಪರಿಚಯ ಇಲ್ಲಿದೆ
ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ:
ಪ್ರಸ್ತುತ ಭಾರತದ ಮುಖ್ಯ ನ್ಯಾಯಮೂರ್ತಿ ಗಳಾಗಿರುವ ರಂಜನ್ ಗೋಗೊಯಿ ಮೂಲತಃ ಅಸ್ಸಾಂ ರಾಜ್ಯದವರು. ಈಶಾನ್ಯ ರಾಜ್ಯಗಳ ಭಾಗದಿಂದ ನ್ಯಾಯಾಂಗ ವ್ಯವಸ್ಥೆಯ ಉನ್ನತ ಪದವಿಯಾದ ಮುಖ್ಯ ನ್ಯಾಯಮೂರ್ತಿ ಸ್ಥಾನ ಅಲಂಕರಿಸಿರುವವರಲ್ಲಿ ಗೊಗೋಯ್ ಮದಲಿಗರು. ಇವರು 1978ರಲ್ಲಿ ಗುವಾಹಟಿಯ ಹೈಕೋರ್ಟ್ ನಲ್ಲಿ ವಕೀಲರಾಗಿ ತಮ್ಮ ವೃತ್ತಿ ಆರಂಭಿಸಿದರು. 2001ರ ಫೆಬ್ರವರಿ 28 ರಂದು ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ನ್ಯಾಯಾಧೀಶರಾದ ನಂತರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗಳಲ್ಲಿ ರಂಜನ್ ಗೋಗಯ್ ಸೇವೆ ಸಲ್ಲಿಸಿದ್ದಾರೆ. 2012ರ ಏಪ್ರಿಲ್‌ನಲ್ಲಿ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದರು. ವೃತ್ತಿ ಜೀವನದಲ್ಲಿ ಹಲವು ಪ್ರಕರಣಗಳನ್ನು ಆಲಿಸಿದ್ದು, ಅವುಗಳಲ್ಲಿ ಅಯೋಧ್ಯೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‍ಸಿಆರ್) ಐತಿಹಾಸಿಕ ಪ್ರಕರಣಗಳಾಗಿವೆ. ನವೆಂಬರ್ 17ರಂದು ನಿವೃತ್ತಿ ಹೊಂದಲಿದ್ದಾರೆ
ನ್ಯಾ. ಶರದ್ ಅರವಿಂದ್ ಬೋಬ್ಡೆ:
ರಂಜನ್ ಗೋಗೊಯ್ ಅವರ ನಿವೃತ್ತಿ ಬಳಿಕ ನ್ಯಾ. ಶರದ್ ಅರವಿಂದ್ ಬೋಬ್ಡೆ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕವಾಗಲಿದ್ದಾರೆ. 2000ರಲ್ಲಿ ಬಾಂಬೆ ಹೈಕೋರ್ಟ್ ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಬೋಬ್ಡೆ ಅವರು ನೇಮಕಗೊಂಡರು. ಮಧ್ಯ ಪ್ರದೇಶದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ಮೂಲದವರಾಗಿರುವ ಬೋಬ್ಡೆ ಅವರು ಏಪ್ರಿಲ್ 2013ರಲ್ಲಿ ಸುಪ್ರಿಂಕೋರ್ಟಿಗೆ ಬಡ್ತಿ ಪಡೆದರು. 63 ವರ್ಷದ ಬೋಬ್ಡೆ ನವೆಂಬರ್ 17ರ ನಂತರ ಸಿಜೆಐ ಆಗಿ 18 ತಿಂಗಳು ಕಾರ್ಯ ನಿರ್ವಹಿಸಲಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ, ವಿಶ್ವದ ಪ್ರಮುಖವಾದ ಕೇಸ್ ಗಳಲ್ಲಿ ಅಯೋಧ್ಯೆ ಪ್ರಕರಣ ಸಹ ಒಂದಾಗಿದೆ ಎಂದು ಹೇಳಿದ್ದರು. ನ್ಯಾ. ರಂಜನ್ ಗೋಗೋಯ್ ನಿವೃತ್ತಿ ನಂತರ ನ.18ರಿಂದ ಭಾರತ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ನ್ಯಾ. ಡಿ.ವೈ.ಚಂದ್ರಚೂಡ್:
ಡಿ.ವೈ.ಚಂದ್ರಚೂಡ್ ಮೇ 2016ರಲ್ಲಿ ಸುಪ್ರೀಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡರು. ಇವರು ಸುಪ್ರೀಂ ಕೋರ್ಟಿನಲ್ಲಿ ಮುಖ್ಯ ನ್ಯಾಯಾಧೀಶರಾಗಿ ಅತಿ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದ ವೈ.ವಿ. ಚಂದ್ರಚೂಡ್ ಅವರ ಪುತ್ರ. ಹಾರ್ವರ್ಡ್ ನಲ್ಲಿ ಕಾನೂನು ಪದವಿ ಪಡೆದಿರುವ ಚಂದ್ರಚೂಡ್ ಬಾಂಬೆ ಮತ್ತು ಅಲಹಬಾದ್ ಹೈಕೋರ್ಟಿನಲ್ಲಿ ಸೇವೆ ಸಲ್ಲಿಸಿದ್ದಾರೆ.
ನ್ಯಾ.ಅಶೋಕ್ ಭೂಷಣ್:
1979ರಲ್ಲಿ ನ್ಯಾ.ಅಶೋಕ್ ಭೂಷಣ್ ಅಲಹಬಾದ್ ಹೈಕೋರ್ಟಿನಲ್ಲಿ ವಕೀಲರಾಗಿ ತಮ್ಮ ವೃತ್ತಿ ಅರಂಭಿಸಿದರು. 2001ರಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು. ಜುಲೈ 2014ರಲ್ಲಿ ಕೇರಳ ಹೈಕೋರ್ಟಿಗೆ ವರ್ಗಾವಣೆಗೊಂಡು ಮಾರ್ಚ್ 2015ರಲ್ಲಿ ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಮೇ 13, 2016ರಲ್ಲಿ ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದಾರೆ.
ನ್ಯಾ.ಅಬ್ದುಲ್ ನಜೀರ್:
ಇವರು ಕರ್ನಾಟಕ ಮೂಲದವರು. 1983 ಫೆಬ್ರವರಿಯಲ್ಲಿ ಕರ್ನಾಟಕದ ಹೈಕೋರ್ಟಿನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. 20 ವರ್ಷಗಳ ಕಾಲ ನ್ಯಾ.ಅಬ್ದುಲ್ ನಜೀರ್ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. 2003ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ತದನಂತರ ಖಾಯಂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ಫೆಬ್ರವರಿ 17, 2017ರಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದರು.
.................. END .................
x