ಜನವರಿ 3, ಸಾವಿತ್ರಿಬಾಯಿ ಪುಲೆ ಅವರ ಜನ್ಮ ದಿನ

ಭಾರತೀಯ ಸಮಾಜವು ವರ್ಣ, ಜಾತಿ, ವರ್ಗವ್ಯವಸ್ಥೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಪೋಷಿಸಿದೆ. ಇಂತಹ ಭಾರತದಲ್ಲಿ ಶತಮಾನಗಳಿಂದ ತುಳಿತಕ್ಕೆ ಒಳಪಟ್ಟ ಸಮುದಾಯಗಳಿಗಾಗಿಯೇ ಮೊಟ್ಟಮೊದಲ ಬಾರಿಗೆ ಶಾಲೆಗಳನ್ನು ತೆರೆದು ಅಕ್ಷರ ಜ್ಞಾನವನ್ನು ನೀಡಿದವರು ಮಹಾತ್ಮ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿ.

ಮಹಾರಾಷ್ಟ್ರದ ಪುಣೆಯಲ್ಲಿ ಅಸ್ಪೃಶ್ಯರು, ತಳವರ್ಗಗಳು ಹಾಗೂ ಮಹಿಳೆಯರಿಗಾಗಿ ಶಾಲೆಯನ್ನು ಆರಂಭಿಸಿ ಅಕ್ಷರದ ಜ್ಞಾನ ನೀಡಲು ಈ ದಂಪತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಜಡ್ಡುಗಟ್ಟಿದ ಸಮಾಜದಿಂದ ಕಿರುಕುಳ ಅನುಭವಿಸಿದ ಫುಲೆ ಅವರು ತಮ್ಮ ಜೀವಿತದ ಅವಧಿಯಲ್ಲಿ ತಳ ಸಮುದಾಯ, ಅಸ್ಪೃಶ್ಯರು ಹಾಗೂ ಮಹಿಳೆಯರ ಶಿಕ್ಷಣ ಹಾಗೂ ಅವರ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡರು.

ಪೇಶ್ವೆಗಳ ಆಡಳಿತದ ಅವಧಿಯಲ್ಲಿ ಹೂವನ್ನು ಮಾರುತ್ತಿದ್ದರಿಂದ ಇವರ ಕುಟುಂಬಕ್ಕೆ ಫುಲೆ ಎಂಬ ಅಡ್ಡ ಹೆಸರು ಬಂತು. ಹಿಂದುಳಿದ ಹೂಗಾರ ಜಾತಿಗೆ ಸೇರಿದ ಸಾವಿತ್ರಿಬಾಯಿ ಫುಲೆ ಅವರು 1831 ರ ಜನವರಿ 3ರಂದು ಸತಾರ ಜಿಲ್ಲೆಯ ನಯಾಗಾಂವ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಖಂಡೋಜಿ ನೇವಸೆ ಪಾಟೀಲ ಹಾಗೂ ತಾಯಿ ಲಕ್ಷ್ಮಿಬಾಯಿ. ಸಾವಿತ್ರಿಬಾಯಿ ಫುಲೆ ಅವರಿಗೆ 1840 ರಲ್ಲಿ ತಮ್ಮ ಸಂಬಂಧಿಕರೇ ಆದ ಜ್ಯೋತಿಬಾ ಫುಲೆ ಅವರೊಂದಿಗೆ ಬಾಲ್ಯವಿವಾಹ ವಾಯಿತು.

ಪ್ರೇರಣೆಯಾದ ಅವಮಾನ: ಬ್ರಾಹ್ಮಣ ಸ್ನೇಹಿತನ ಮದುವೆಯಲ್ಲಿ ಅವಮಾನಿತರಾಗಿ ಹೊರ ದೂಡಲ್ಪಟ್ಟ ಜ್ಯೋತಿಬಾ ಫುಲೆ ಅವರು ವಿದ್ಯೆಯಿಂದ ವಂಚಿತರಾದ ವರ್ಗಕ್ಕೆ ಶಾಲೆಯನ್ನು ತೆರೆಯುವ ಪಣತೊಟ್ಟು 1848ರಲ್ಲಿ ಮೊದಲ ಬಾರಿಗೆ ಪುಣೆಯಲ್ಲಿ ಕೆಳವರ್ಗಗಳು, ಅಸ್ಪೃಶ್ಯರು ಹಾಗೂ ಮಹಿಳೆಯರಿಗಾಗಿಯೇ ಪ್ರತ್ಯೇಕ ಶಾಲೆಯನ್ನು ತೆರೆದರು.  ಕೆಳವರ್ಗದ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಯಾರೂ ಮುಂದೆ ಬಾರದಿದ್ದಾಗ ತಮ್ಮ ಮಡದಿಯನ್ನೇ ಶಿಕ್ಷಕಿಯನ್ನಾಗಿ ನೇಮಕ ಮಾಡಿದರು.

ಮೊದಲ ಶಿಕ್ಷಕಿ: 1847ರಲ್ಲಿ ಸಾವಿತ್ರಿಬಾಯಿ ಅವರು ಫಾತಿಮಾ ಶೇಖ್‌ ಎಂಬ ಮುಸ್ಲಿಂ ಮಹಿಳೆಯಿಂದ ಅಧ್ಯಾಪಕ ತರಬೇತಿ ಪಡೆದಿದ್ದರು. ಕೇವಲ 17 ವರ್ಷದಲ್ಲಿ ಶಿಕ್ಷಕ ತರಬೇತಿ ಪೂರೈಸಿದ  ಸಾವಿತ್ರಿಬಾಯಿ ಮಹಾರಾಷ್ಟ್ರದಲ್ಲಿ ತರಬೇತಾದ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1848ರಲ್ಲಿ  ಮೊಟ್ಟಮೊದಲ ಬಾರಿಗೆ ಪುಣೆಯ ಬುಧವಾರಪೇಟೆಯ ‘ಭೀಡೆ’ ಎಂಬವರ ಮನೆಯಲ್ಲಿ ಹೆಣ್ಣುಮಕ್ಕಳ ಶಾಲೆ ತೆರೆದರು. ಆರು ಹೆಣ್ಣುಮಕ್ಕಳಿದ್ದ ಈ ಶಾಲೆಗೆ ಸಾವಿತ್ರಿಬಾಯಿ ಫುಲೆ ಅವರೇ ಶಿಕ್ಷಕಿಯಾಗಿ ನೇಮಕವಾದರು.

1851ರಲ್ಲಿ ಪುಣೆಯ ರಸ್ತಾಪೇಟೆಯಲ್ಲಿ ಹೆಣ್ಣುಮಕ್ಕಳಿಗಾಗಿಯೇ ಮತ್ತೊಂದು ವಿಶೇಷ ಶಾಲೆ, 1851–52ರಲ್ಲಿ ಎಲ್ಲ ವರ್ಗದ ಮಕ್ಕಳಿಗಾಗಿ ಮತ್ತೆರಡು ಶಾಲೆಗಳನ್ನು ತೆರೆದರು. ಇದಾದ ಎರಡು ವರ್ಷಗಳ ಅನಂತರ ಮಹರರು, ಮಾಂಗ ಜನಾಂಗದವರಿಗಾಗಿಯೇ ಒಂದು ಶಾಲೆಯನ್ನು ತೆರೆದು ಜಾತಿವ್ಯವಸ್ಥೆ, ಲಿಂಗತಾರತಮ್ಯದಿಂದ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಶೂದ್ರಾತಿ ಶೂದ್ರ ಜಾತಿಗಳಿಗೆ ಸ್ವಾಭಿಮಾನದ ಪಾಠವನ್ನು ಹೇಳಿಕೊಟ್ಟರು.

ದಂಪತಿಯ ಅಕ್ಷರ ಕ್ರಾಂತಿ.
ಹೀಗೆ ಸುಮಾರು 18 ಶಾಲೆಗಳನ್ನು ಫುಲೆ ದಂಪತಿ ತೆರೆದು ಅಕ್ಷರಕ್ರಾಂತಿಯನ್ನೇ ಮಾಡಿದರು. ತಾವು ಸ್ಥಾಪಿಸಿದ ಸತ್ಯಶೋಧಕ ಸಮಾಜದ ಮೂಲಕ 1876–77 ರ ವೇಳೆಗಾಗಲೇ ಐವತ್ತಕ್ಕೂ ಹೆಚ್ಚು ಹಾಸ್ಟೆಲ್‌ಗಳನ್ನು ನಡೆಸುತ್ತಿದ್ದರು. ಫುಲೆ–ದಂಪತಿ ಸ್ಥಾಪಿಸಿದ ಶಾಲೆಯಲ್ಲಿ ಓದಿದ, ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ತಂದೆ ರಾಮ್‌ಜೀ ಸಕ್ಪಾಲ್‌ ಅವರು ನಾಲ್ಕನೇ ತರಗತಿ ತೇರ್ಗಡೆಯಾಗಿ ಮಿಲಿಟರಿ ಸೇರಿದ್ದರು.

1854ರಲ್ಲಿ ರೈತರು ಹಾಗೂ ಕಾರ್ಮಿಕರಿಗಾಗಿ ರಾತ್ರಿಶಾಲೆಗಳನ್ನು ಆರಂಭಿಸಿದ್ದರು. ಸದಾ ತಳ ವರ್ಗದ ಜನರ ಏಳಿಗೆಗಾಗಿ ತುಡಿಯುತ್ತಿದ್ದ ಫುಲೆ ದಂಪತಿಯು ಒಮ್ಮೆ ಅಸ್ಪೃಶ್ಯ ಸಮುದಾಯ ಗರ್ಭಿಣಿ ಮಹಿಳೆಯೊಬ್ಬರು ಮೇಲ್ಜಾತಿಯವರ ಬಾವಿಯಲ್ಲಿ ನೀರಿಗಾಗಿ ಕಾದು ಕೊನೆಗೂ ನೀರು ಸಿಗದೇ ಬಾಯಾರಿ ಸುಸ್ತಾಗಿ ಬಿದ್ದದ್ದನ್ನು ನೋಡಿದರು. ಮುಂದೆ ಫುಲೆ–ದಂಪತಿ ತಮ್ಮ ಮನೆಯ ಅಂಗಳದಲ್ಲಿಯೇ ಬಾವಿ ತೋಡಿಸಿ ಅಸ್ಪೃಶ್ಯರಿಗೆ ನೀರು ನೀಡಿದರು. 1888 ರಲ್ಲಿ ಇವರ ಸೇವೆಯನ್ನು ಗುರುತಿಸಿ ಬ್ರಿಟಿಷ್ ಸರ್ಕಾರ ಆರು ಸಾವಿರ ಜನರ ಸಮ್ಮುಖದಲ್ಲಿ ‘ಮಹಾತ್ಮ ಜ್ಯೋತಿಬಾ ಫುಲೆ’ ಎಂಬ ಬಿರುದು ನೀಡಿ ಗೌರವಿಸಿತ್ತು.

ಬಾಳು ಬೆಳಗಿದ ಆದರ್ಶ ದಂಪತಿ:
ಹಲವು ಅನಾಥಾಶ್ರಮಗಳನ್ನು ಸ್ಥಾಪಿಸಿದ ಫುಲೆ ದಂಪತಿ ಅಪ್ಪ, ಅಮ್ಮಂದಿರನ್ನು ಕಳೆದುಕೊಂಡ ನೂರಾರು ಅನಾಥ ಮಕ್ಕಳಿಗೆ ತಾವೇ ಅಪ್ಪ- ಅಮ್ಮಂದಿರಾದರು. ತಮಗೆ ಮಕ್ಕಳಾದರೆ ಅನಾಥ ಮಕ್ಕಳ ಮೇಲಿನ ತಮ್ಮ ಕಾಳಜಿ, ಪ್ರೀತಿ ಕಡಿಮೆಯಾಗಿ ಬಿಡುತ್ತದೆ ಏನೋ ಎಂದು ಭಾವಿಸಿ, ಫುಲೆ-ದಂಪತಿ, ‘ಸ್ವಂತ ಮಕ್ಕಳು ಬೇಡ’ ಎಂಬ ಕಠೋರ ನಿರ್ಧಾರ ತಳೆದರು. ಬ್ರಾಹ್ಮಣ ವಿಧವೆಗೆ ಹುಟ್ಟಿದ ಮಗುವೊಂದನ್ನು ದತ್ತು ಸ್ವೀಕರಿಸಿದರು;  ಆತನನ್ನು ವೈದ್ಯನಾಗಿ ಮಾಡಿದರು. ಬಾಲ್ಯವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ನಿರಂತರ ಜಾಗೃತಿ ಕಾರ್ಯಕ್ರಮ ಆಯೋಜಿಸಿದರು.

‘ನನ್ನ ಎಲ್ಲ ಸಮಾಜಮುಖಿಯ  ಕಾರ್ಯಗಳಿಗೆ ಪ್ರೇರಣೆ ನೀಡಿ, ಅದು ಯಶಸ್ವಿಯಾಗುವಂತೆ  ನೋಡಿಕೊಂಡಿದ್ದೇ ನನ್ನ ಪತ್ನಿ’ ಎಂದು ಜ್ಯೋತಿಬಾ ಫುಲೆ ಅವರು ತಮ್ಮ ಪತ್ನಿಯನ್ನು ಹೊಗಳಿದ್ದಾರೆ.

ವ್ಯಾಪಕವಾಗಿ ಹರಡಿದ್ದ ಪ್ಲೇಗ್ ಕಾಯಿಲೆಗೆ ತುತ್ತಾದ ರೋಗಿಗಳ ಸೇವೆಯಲ್ಲಿ  ನಿಃಸ್ವಾರ್ಥವಾಗಿ ತೊಡಗಿಕೊಂಡ ಅವರು, ನಿರ್ಗತಿಕರಿಗಾಗಿ ಗಂಜಿ ಕೇಂದ್ರವನ್ನು ಸ್ಥಾಪಿಸಿದರು. ಕ್ಷಾಮದ ಸಂದರ್ಭದಲ್ಲಿ ಬಡತನ, ಹಸಿವು, ನಿರುದ್ಯೋಗದಿಂದ ಹೆಣ್ಣುಮಕ್ಕಳು ದೇಹ ಮಾರಿಕೊಳ್ಳುವುದನ್ನು ತಪ್ಪಿಸಿ, ಘನತೆಯಿಂದ ಬದುಕುವ ದಾರಿ ಹುಡುಕಿಕೊಟ್ಟರು. ಕೊನೆಗೆ ತಾವೇ ಪ್ಲೇಗ್ ಕಾಯಿಲೆಗೆ ತುತ್ತಾಗಿ, ಅವರ 66ನೇ ವಯಸ್ಸಿನಲ್ಲಿ 1897ರ ಮಾರ್ಚ್ 10ರಂದು ಸಾವನ್ನಪ್ಪಿದರು. ಒಂದು ಜೀವಮಾನದಲ್ಲಿ ಎಷ್ಟೆಲ್ಲಾ ಸಾಧನೆ ಮಾಡಬಹುದು ಎಂಬಂತೆ ಕೆಲಸ ಮಾಡಿದ ಸಾವಿತ್ರಿಬಾಯಿ ಎಂಬ ಮಹಾಚೇತನ ಅಜರಾಮರವಾಯಿತು.

ಪುರುಷಪ್ರಧಾನ ಸಮಾಜದಲ್ಲಿ ಸಮಾನತೆ, ಶಿಕ್ಷಣ, ಸ್ವಾತಂತ್ರ್ಯ, ಅಭಿವ್ಯಕ್ತಿ  ಹಕ್ಕಿನಿಂದ  ವಂಚಿತಳಾಗಿದ್ದ ಮಹಿಳೆಗೆ  ಶಿಕ್ಷಣ ನೀಡಿ ವಿಚಾರವಂತರನ್ನಾಗಿ ಮಾಡಿದ ಸಾವಿತ್ರಿಬಾಯಿ ಫುಲೆ ಅವರು ನಮ್ಮ ದೇಶದ ಇತಿಹಾಸಕಾರರ ಉದ್ದೇಶಪೂರ್ವಕ ಅವಜ್ಞೆಗೆ ಒಳಗಾದಂತೆ ಕಾಣುತ್ತದೆ.


ಸಗಣಿ ಎರಚುತ್ತಿದ್ದ ಸವರ್ಣೀಯರು:
ಧೈರ್ಯ ಹಾಗೂ ಸಾಹಸವನ್ನು ಚಿಕ್ಕಂದಿನಿಂದಲೇ ಮೈಗೂಡಿಸಿಕೊಂಡಿದ್ದ ಸಾವಿತ್ರಿಬಾಯಿ, ಬಡಮಕ್ಕಳಿಗೆ ಪಾಠ ಕಲಿಸಲು ಹೋಗುತ್ತಿದ್ದರೆ, ದಾರಿಯುದ್ದಕ್ಕೂ ಬ್ರಾಹ್ಮಣರು ಮನೆಯ ಅಂಗಳದಲ್ಲಿ ನಿಂತು ಕುಹಕವಾಡುತ್ತಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು.  ಅವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ,  ಮೈಮೇಲೆ ಸಗಣಿ ಎರೆಚುತ್ತಿದ್ದರು. ಕಲ್ಲುಗಳಿಂದ ಹೊಡೆಯುತ್ತಿದ್ದುದೂ ಉಂಟು.  ನಿತ್ಯ ನರಕಯಾತನೆ. ಇವಾವುದಕ್ಕೂ ಧೃತಿಗೆಡದ ಸಾವಿತ್ರಿಬಾಯಿ, ತಮ್ಮ ಪಾಡಿಗೆ ತಾವು ಶಾಲೆಗೆ ತೆರಳುತ್ತಿದ್ದರು. ಶಿಕ್ಷಣ ವಂಚಿತ ಕೆಳ ಸಮುದಾಯಕ್ಕೆ ಅಕ್ಷರದೀಕ್ಷೆ ನೀಡುವ ತಮ್ಮ ವ್ರತವನ್ನು ಮಾತ್ರ ಅವರು ಬಿಡಲಿಲ್ಲ. ಇಷ್ಟೆಲ್ಲ ಅವಮಾನ ಮಾಡಿದರೂ, ತಮ್ಮ ಕಾರ್ಯದಲ್ಲಿ ತಾವು ತೊಡಗಿದ್ದ ಫುಲೆ ದಂಪತಿಯ ಸಂಯಮದ ವರ್ತನೆ ಮೇಲ್ಜಾತಿಯವರನ್ನು ಮತ್ತಷ್ಟು ಕೆರಳಿಸಿತು. ವಸತಿ ಶಾಲೆಯಲ್ಲಿ ಮಲಗಿದ್ದ ವೇಳೆ ಫುಲೆ–ದಂಪತಿಯ ಕೊಲೆಗೆ ಯತ್ನವೂ ನಡೆಯಿತು.  ‘ಸಹನೆಗೂ ಒಂದು ಮಿತಿ ಬೇಡವೇ? ಒಂದು ಬಾರಿ ತಿರುಗಿನಿಲ್ಲು’ ಎಂಬ ಆಪ್ತರ ಸಲಹೆಯಂತೆ, ಕೊನೆಗೊಂದು ಬಾರಿ  ಸಾವಿತ್ರಿ ಬಾಯಿ ವ್ಯಕ್ತಿಯೊಬ್ಬನಿಗೆ ಕಪಾಳಕ್ಕೆ ಬಾರಿಸಿಯೇ ಬಿಟ್ಟರು.

ಮುಂದಿನ ಜನಾಂಗ ನಿನ್ನನ್ನು ಸ್ಮರಿಸುತ್ತದೆ...
‘ಅಜ್ಞಾನದಿಂದ ಜ್ಞಾನದ ಕಡೆಗೆ ಈ ಜನರನ್ನು ಕರೆದುಕೊಂಡು ಹೊರಟ ನಿನ್ನ ಮಹತ್ವದ ಕಾರ್ಯಕ್ಕೆ ಬೈಗುಳ, ಅಪಮಾನ, ಹೀಯಾಳಿಕೆ  ಸಾಮಾನ್ಯ. ಯಾವುದಕ್ಕೂ ಹೆದರಬೇಡ.  ಈಗ ನೀನು ಮಾಡಿದ ಕೆಲಸ ಶತಮಾನದವರೆಗೆ ನಿನ್ನನ್ನು ಸ್ಮರಿಸುವಂತೆ ಮಾಡುತ್ತದೆ’ ಎಂದು  ಪತಿ ಜ್ಯೋತಿ ಬಾ ಫುಲೆ ಅವರು ಪತ್ನಿಗೆ ಧೈರ್ಯ ತುಂಬುತ್ತಿದ್ದರು.

ಅನಕ್ಷರತೆಯ ವಿರುದ್ಧ ಮಾತ್ರವಲ್ಲದೇ ಅನೇಕ ಸಾಮಾಜಿಕ ಅನಿಷ್ಟಗಳ ವಿರುದ್ಧವೂ ಫುಲೆ–ದಂಪತಿ ಉಗ್ರ ಹೋರಾಟ ನಡೆಸಿದರು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಮಹತ್ವದ ಕಾಯಕಕ್ಕಷ್ಟೆ ಅವರು ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಅದರ ಜೊತೆಗೆ ವಿಧವೆಯರ ಕೇಶಮುಂಡನವನ್ನು ವಿರೋಧಿಸಿ ಹೋರಾಟ ಆರಂಭಿಸಿದರು. ವಿರೋಧವನ್ನು ಲೆಕ್ಕಿಸದೆ ವಿಧವೆಯರ ಮರುಮದುವೆ ಮಾಡಿಸಿ, ಅವರ ಬಾಳನ್ನು ಬೆಳಗಿದರು. ವಿಧವೆಯರು ಮತ್ತು  ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿಗೆ ಹುಟ್ಟುವ ಮಕ್ಕಳಿಗಾಗಿ ’ಬಾಲಹತ್ಯಾ ಪ್ರತಿಬಂಧಕ ಗೃಹ’ಗಳನ್ನು ತೆರೆದರು, 1863ರಲ್ಲಿ . ಅನಾಥ ವಿಧವೆಯರ ಸುರಕ್ಷಿತ ಹೆರಿಗೆಗಾಗಿ ‘ಗುಪ್ತಪ್ರಸೂತಿ ಗೃಹ’ಗಳನ್ನೂ ಸ್ಥಾಪಿಸಿದರು.