ಸಾಕ್ಷರತೆ ಎಂಬುದು ಮನುಷ್ಯನ ಘನತೆ ಮತ್ತು ಮಾನವ ಹಕ್ಕು ಆಗಿದೆ. ಸಾಕ್ಷರತೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿಯೇ ಪ್ರತಿವರ್ಷ ಸೆಪ್ಟೆಂಬರ್ 8 ಅನ್ನು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. 1966ರ ಅಕ್ಟೋಬರ್ 26ರಂದು ಯುನೆಸ್ಕೋ ಜನರಲ್ ಕಾನ್ಫರೆನ್ಸ್‌ನಲ್ಲಿ ಸೆಪ್ಟೆಂಬರ್ 8 ನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಘೋಷಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷ ಕೂಡ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ವಿಶ್ವವ್ಯಾಪಿಯಾಗಿ ಆಚರಣೆ ಮಾಡಲಾಗುತ್ತಿದೆ. ಸಾಕ್ಷರತೆ ಮತ್ತು ಬಹುಭಾಷಿಕತೆಯತ್ತ ಗಮನವಿರಲಿ ಎಂಬ ಥೀಮ್‌ನೊಂದಿಗೆ 2019ರ ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ಸಾಕ್ಷರತೆ ಎಂಬುದು ಪ್ರತಿಯೊಬ್ಬರಿಗೂ ಘನತೆ ಮತ್ತು ಹಕ್ಕಿನ ಪ್ರಶ್ನೆಯಾಗಿರುತ್ತದೆ. ಸಾಕ್ಷರತೆ ಹೊಂದಿದ ಮನುಷ್ಯ ಬದುಕುತ್ತಾನೆ ಮತ್ತು ಆತನಿಗೆ ತನ್ನ ಹಕ್ಕಿನ ಬಗೆಗೆ ಸಂಪೂರ್ಣವಾದ ಜ್ಞಾನ ಇರುತ್ತದೆ. ಸಾಕ್ಷರತೆಯ ಅಗತ್ಯತೆಯ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿಯೇ ಪ್ರತಿವರ್ಷ ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಣೆ ಮಾಡಲಾಗುತ್ತದೆ.
ಸರ್ಕಾರಗಳಿಗೆ, ನಾಗರಿಕ ಸಮಾಜಗಳಿಗೆ ಮತ್ತು ಜನರಿಗೆ ವಿಶ್ವದ ಸಾಕ್ಷರತಾ ಮಟ್ಟವನ್ನು ಸುಧಾರಿಸಲು ಅವಕಾಶವನ್ನು ಮತ್ತು ಸಾಕ್ಷರತಾ ಸವಾಲುಗಳನ್ನು ಮೀರಿ ನಿಲ್ಲಲು ಈ ದಿನ ನೀಡುತ್ತದೆ ಎಂದು ಯುನೆಸ್ಕೋ ಹೇಳುತ್ತದೆ.
ಇತಿಹಾಸ
1966ರ ಅಕ್ಟೋಬರ್ 26ರಂದು ನಡೆದ ಯುನೆಸ್ಕೋದ 14ನೇ ಜನರಲ್ ಕಾನ್ಫರೆನ್ಸ್‌ನಲ್ಲಿ ಸೆ 8 ಅನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. 1967ರಿಂದ ವಿಶ್ವವ್ಯಾಪಿಯಾಗಿ ಈ ದಿನವನ್ನು ಆಚರಿಸುತ್ತಾ ಬರಲಾಯಿತು. ಈ ಮೂಲಕ ಜನರಿಗೆ, ಸಮಾಜಕ್ಕೆ ಮತ್ತು ಸಮುದಾಯಕ್ಕೆ ಸಾಕ್ಷರತೆಯ ಮಹತ್ವಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಯಾಕೆ ಈ ಆಚರಣೆ
ದೇಶದಾದ್ಯಂತ ಜನರಿಗೆ ತಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸುವುದು ಅಂತರಾಷ್ಟ್ರೀಯ ಸಾಕ್ಷರತಾ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಸಾಕ್ಷರತೆಯನ್ನು ಸಾಮಾಜಿಕ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾದ ಅಂಶ ಎಂದು ಪರಿಗಣಿಸಲಾಗಿದೆ.
ಬಡತನ ಪ್ರಮಾಣವನ್ನು ಕುಗ್ಗಿಸುವುದು, ಜನಸಂಖ್ಯೆಯನ್ನು ನಿಯಂತ್ರಿಸುವುದು, ಲಿಂಗ ಅಸಮಾನತೆಯನ್ನು ಹೋಗಲಾಡಿಸುವುದು ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾದರೆ ಪ್ರತಿಯೊಬ್ಬ ಮನುಷ್ಯನು ಸಾಕ್ಷರನಾಗಿರುವುದು ಅತಿ ಮುಖ್ಯವಾಗಿರುತ್ತದೆ.
ಬಡತನ ನಿರ್ಮೂಲನೆಯಿಂದ, ಜನಸಂಖ್ಯೆ ನಿಯಂತ್ರಣದಿಂದ ಮತ್ತು ಲಿಂಗ ಅಸಮಾನತೆಯನ್ನು ಹೋಗಲಾಡಿಸುವುದರಿಂದ ಜನರ ವೈಯುಕ್ತಿಕ ಬೆಳವಣಿಗೆ ಸಮಗ್ರ ರೀತಿಯಲ್ಲಿ ಆಗುತ್ತದೆ. ಇದು ರಾಷ್ಟ್ರ ಮತ್ತು ವಿಶ್ವದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುತ್ತದೆ.
2019ರ ಥೀಮ್: ಸಾಕ್ಷರತೆ ಮತ್ತು ಬಹುಭಾಷಿಕತೆ
ಪ್ರತಿವರ್ಷದಂತೆ ಈ ವರ್ಷವೂ ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನು ವಿಶ್ವದಾದ್ಯಂತ ಮಾಡಲಾಗುತ್ತಿದೆ. ಸಾಕ್ಷರತೆ ಮತ್ತು ಬಹುಭಾಷಿಕತೆ ಎಂಬುದು ಈ ವರ್ಷದ ಥೀಮ್ ಆಗಿದೆ.
ಸಾಕ್ಷರತೆಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಲಾಗಿದ್ದರೂ ಕೂಡ ಕೆಲವೊಂದು ಪ್ರದೇಶ ಮತ್ತು ಕೆಲವೊಂದು ಜನಾಂಗಗಳಲ್ಲಿ ಇನ್ನು ಕೂಡ ಸಾಕ್ಷರತೆಯು ನಿರೀಕ್ಷಿತ ಮಟ್ಟವನ್ನು ಮುಟ್ಟಿಲ್ಲ. ಹೀಗಾಗಿ ಶಿಕ್ಷಣದಲ್ಲಿ ಮತ್ತು ಸಾಕ್ಷರತ ಅಭಿವೃದ್ಧಿಯಲ್ಲಿ ಬಹುಭಾಷಿಕತೆ ಅಳವಡಿಸಿಕೊಳ್ಳುವುದರಿಂದ ಸಾಕ್ಷರತೆಯ ಸವಾಲುಗಳನ್ನು ಎದುರಿಸಲು ಸರಳವಾಗುತ್ತದೆ ಮತ್ತು ಇದರಿಂದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಬಹುದಾಗಿದೆ. ಎಂಬುದಾಗಿ ಯುನೆಸ್ಕೋ ಹೇಳಿದೆ.
“ನಮ್ಮ ವಿಶ್ವ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯವಾಗಿದೆ. 7,000 ಜೀವಂತ ಭಾಷೆಗಳನ್ನು ಹೊಂದಿದೆ. ಭಾಷೆ ಸಂವಹನಕ್ಕಿರುವ ಅಸ್ತ್ರ, ಜೀವಮಾನದ ಕಲಿಕೆಗೆ ಇರುವ ವಾಹಕ, ವಿಶ್ವಕ್ಕೆ ಕಾರ್ಯನಿರ್ವಹಣೆ ಮಾಡುವುದಕ್ಕಿರುವ ಸಾಧನವಾಗಿದೆ. ವಿಭಿನ್ನ ಭಾಷೆ, ಸಂಸ್ಕೃತಿ, ದೃಷ್ಟಿಕೋನ, ಜ್ಞಾನ ವ್ಯವಸ್ಥೆ ನಮ್ಮಲ್ಲಿದೆ” ಎಂದು ಯುನೆಸ್ಕೋ ಡೈರೆಕ್ಟರ್ ಜನರಲ್ ಅಡ್ರೆ ಅಝೌಲೆ ಹೇಳಿದ್ದಾರೆ.