ಪಢೇ ಭಾರತ್ ಬಢೇ ಭಾರತ್.


ಅರ್ಥಗ್ರಹಿಕೆಯೊಂದಿಗೆ ಪ್ರಾರಂಭಿಕ ಓದು ಮತ್ತು ಬರಹ ಮತ್ತು ಪ್ರಾರಂಭಿಕ ಗಣಿತ ಕಾರ್ಯಕ್ರಮ.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ಮತ್ತು ಆರ್‌ಟಿಇ ಕಾಯ್ದೆ-2009 ಗಳಲ್ಲಿ ಓದುವ ಮತ್ತು ಬರೆಯುವ ಪ್ರಕ್ರಿಯೆಗಳು ಪಠ್ಯಪುಸ್ತಕವನ್ನು ಮೀರಿ ನಿಲ್ಲಬೇಕು ಎನ್ನುವುದನ್ನು ಒತ್ತಿ ಹೇಳಿದೆ. ತರಗತಿಗಳಲ್ಲಿ ಓದುವುದು ಮತ್ತು ಬರೆಯುವುದನ್ನು ಅರ್ಥಪೂರ್ಣ ಮತ್ತು ಪರಿಣಾಮಕಾರಿ ಯಾಗಿಸದೇ ಬರೀ ಪಠ್ಯಪುಸ್ತಕಗಳಿಗೆ ಸೀಮಿತಗೊಳಿಸುವುದರಿಂದ ವಿದ್ಯಾರ್ಥಿಯ ಜ್ಞಾನದ ಸಂರಚನೆಯನ್ನು ಸೀಮಿತಗೊಳಿಸಿದಂತಾಗುತ್ತದೆ. ಅಲ್ಲದೇ ಸ್ಪಷ್ಟವಾಗಿ ಅರ್ಥದೊಂದಿಗೆ ಓದುವುದು ಮತ್ತು ಅರ್ಥಪೂರ್ಣವಾಗಿ ಬರೆಯುವುದರಿಂದ ವಿದ್ಯಾರ್ಥಿಯು ಉತ್ತಮ ಓದುಗ ಮತ್ತು ಬರಹಗಾರನಾಗಿ ರೂಪಗೊಳ್ಳುತ್ತಾನೆ. ಇದು ಭಾಷಾ ಬೆಳವಣಿಗೆ ಮತ್ತು ಸಂವಹನ ಕೌಶಲಗಳು ವಿದ್ಯಾರ್ಥಿಯಲ್ಲಿ ಬೆಳೆಯಲು ಸಹಕಾರಿ. ಅರ್ಥಗ್ರಹಿಕೆಯೊಂದಿಗೆ ಒದು ಬರಹ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಹೊಂದಿದ್ದರೂ ಸಹ ಭಾರತೀಯ ಶಾಲಾ ವ್ಯವಸ್ಥೆಯಲ್ಲಿ ಇದು ಪರಿಣಾಮಕಾರಿಯಾಗಿಲ್ಲದಿರುವ ಬಗ್ಗೆ 1993 ರ ಯಶಪಾಲ್ ಸಮಿತಿಯು ಆತಂಕ ವ್ಯಕ್ತಪಡಿಸಿದೆ.

ಓದುವಿಕೆ ಯಾವಾಗಲೂ ಅರ್ಥಗ್ರಹಿಕೆಯನ್ನು ಹೊಂದಿರಬೇಕಾದ ಪ್ರಕ್ರಿಯೆ. ಓದುವ ಪ್ರಕ್ರಿಯೆಯು ಓದುಗ ಮತ್ತು ಒದಬೇಕಾದ ಪಠ್ಯದೊಂದಿಗಿನ ಸಂವಹನವಾಗಿದ್ದು, ಅರ್ಥಗರ್ಭಿತ ಸರಾಗವಾದ ಓದು, ಓದುಗನ ಅನುಭವ, ಭಾಷಾ ಸಾಮರ್ಥ್ಯ, ಪೂರ್ವಜ್ಞಾನವನ್ನು ಅವಲಂಬಿಸಿರುತ್ತದೆ. ಓದುವ ಕೌಶಲ ಅರ್ಥಗರ್ಭಿತವಾಗಿದ್ದು ಸರಾಗವಾಗಿದ್ದರೆ ಮಾತ್ರ ಬರೆಯುವಿಕೆಯೂ ಕೂಡಾ ಅರ್ಥಪೂರ್ಣ ವಾಗಿರುತ್ತದೆ. ಹಾಗೆಯೇ, ಮಕ್ಕಳು ಗಣಿತ ಕಲಿಕೆಯ ಕಡೆಗೆ ಒಂದು ವಿಧವಾದ ಭಯದ ವಾತಾವರಣವನ್ನು ಶಾಲೆಗಳು ಹೊಂದಿರುವುದನ್ನು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005 ಬೆರಳು ಮಾಡಿ ತೋರಿಸಿದೆ. 1 ಮತ್ತು 2 ನೇ ತರಗತಿಯ ಕಲಿಕಾರ್ಥಿಗಳ ವಯೋಮಾನವು ಭಾಷೆ ಮತ್ತು ಗಣಿತ ಕಲಿಕೆಯ ಅತೀ ಮುಖ್ಯವಾದ ಹಂತ. ಈ ಹಂತದಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳು ಜೀವನ ಪರ್ಯಂತ ಕಡಿಮೆ ಕಲಿಕಾ ಸಾಧನೆಯನ್ನು ಪ್ರದರ್ಶಿಸುವ ಸಾಧ್ಯತೆಯಿದೆ. ಮಕ್ಕಳು ಶಾಲೆ ಬಿಡುವ ಪ್ರಮಾಣವೂ ಇದರೊಂದಿಗೆ ತಳುಕು ಹಾಕಿಕೊಂಡಿದೆ. ಆದುದರಿಂದ ಈ ಹಂತದಲ್ಲಿ ಮಕ್ಕಳು ಉತ್ತವವಾಗಿ ಓದುವ ಮತ್ತು ಬರೆಯುವ, ಸರಳ ಗಣಿತ ಮಾಡುವ ಪೂರಕವಾದ ವಾತಾವರಣವನ್ನು ಸೃಷ್ಠಿಸುವುದು ಶಿಕ್ಷಣ ವ್ಯವಸ್ಥೆಯ ಆದ್ಯ ಕಾರ್ಯವಾಗಬೇಕು. ಈ ಹಿನ್ನೆಲೆಯಲ್ಲಿ ಅರ್ಥಗರ್ಭಿತ ಓದು, ಬರಹ ಮತ್ತು ಆರಂಭಿಕ ಗಣಿತದ ಕೌಶಲಗಳನ್ನು ಕಲಿಕಾರ್ಥಿಗಳಲ್ಲಿ ಅಭಿವೃದ್ಧಿಪಡಿಸಬೇಕಾದ ಕಾರ್ಯಕ್ರಮವೊಂದರ ರಾಷ್ಟçಮಟ್ಟದ ಅವಶ್ಯಕತೆಯನ್ನು ಮನಗಂಡು‚ ಪಢೇ ಭಾರತ್ ಬಢೇ ಭಾರತ್ - ಅರ್ಥಗ್ರಹಿಕೆಯೊಂದಿಗೆ ಪ್ರಾರಂಭಿಕ ಓದು ಮತ್ತು ಬರಹ ಮತ್ತು ಪ್ರಾರಂಭಿಕ ಗಣಿತ ಕಾರ್ಯಕ್ರಮವನ್ನು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ರೂಪಿಸಲಾಗಿದೆ. 

ಈ ಕಾರ್ಯಕ್ರಮದ ಎರಡು ಮಜಲುಗಳೆಂದರೆ-
1) ಅರ್ಥಗ್ರಹಿಕೆಯೊಂದಿಗೆ ಪ್ರಾರಂಭಿಕ ಓದು ಮತ್ತು ಬರಹ
2) ಪ್ರಾರಂಭಿಕ ಗಣಿತ

ಕಾರ್ಯಕ್ರಮದ ಉದ್ದೇಶಗಳು:

1. ಮಕ್ಕಳು ಸ್ವತಂತ್ರ ಕಲಿಕಾದಾರರಾಗಿ ಆಯಾ ತರಗತಿಗೆ ಅನುಗುಣವಾಗಿ, ಅರ್ಥಗ್ರಹಿಕೆಯೊಂದಿಗೆ ಓದುವ ಮತ್ತು ಬರೆಯುವ ಕೌಶಲವನ್ನು ಪಡೆಯಲು ನಿರಂತರವಾಗಿ ಕ್ರಿಯಾಶೀಲತೆಯೊಂದಿಗೆ ಕಲಿಕೆಯಲ್ಲಿ ಭಾಗವಹಿಸಲು ಪ್ರೇರೇಪಿಸುವುದು.

2. ಮಕ್ಕಳು ಗಣಿತದ ಪರಿಕಲ್ಪನೆಗಳಾದ ಸಂಖ್ಯೆಗಳು, ಅಳತೆ ಮತ್ತು ಆಕೃತಿಗಳನ್ನು ತಾರ್ತಿಕವಾಗಿ ಅರ್ಥೈಸಿಕೊಂಡು, ಸಾಂಖ್ಯಿಕ ಮತ್ತು ಸ್ಥಳ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸುವ ಕೌಶಲವನ್ನು
ಪಡೆಯುವಂತೆ ಮಾಡುವುದು.

3. ಮಕ್ಕಳು ಓದುವ ಮತ್ತು ಬರೆಯುವಂತಹ ಅನುಭವಗಳನ್ನು ನೈಜ ಮತ್ತು ಸಂತಸದಾಯಕ ಸನ್ನಿವೇಶವನ್ನಾಗಿಸುವುದು.

4. ಮಕ್ಕಳನ್ನು ಸ್ವತಂತ್ರ ಮತ್ತು ಕ್ರಿಯಾಶೀಲ ಓದುವ ಮತ್ತು ಬರೆಯುವವರಾಗಿಸುವ ಪ್ರಕ್ರಿಯೆಯಲ್ಲಿ ಮನೆ ಮತ್ತು ಶಾಲೆಯ ಸ್ಥಿತ್ಯಂತರ ಹಾಗೂ ಮಕ್ಕಳಲ್ಲಿರುವ ಸಾಹಿತ್ಯಾಭಿರುಚಿಯ ಸಾಮಾಜಿಕ ದೃಷ್ಠಿಕೋನವನ್ನು ಗುರುತಿಸುವುದು.


ಕಾರ್ಯ ತಂತ್ರಗಳು:

1. ಓದು, ಬರಹ ಮತ್ತು ಆರಂಭಿಕ ಗಣಿತದ ಕಲಿಕಾ ಶಾಸ್ತçದೆಡೆಗೆ (ಪೆಡಗಾಜಿ) ಶಿಕ್ಷಕರು, ಮುಖ್ಯಶಿಕ್ಷಕರು, ಪೋಷಕರು, ಶಿಕ್ಷಣ ತಜ್ಞರು ಮತ್ತು ನೀತಿ ನಿರೂಪಕರೊಂದಿಗೆ ಸಂವಾದವನ್ನು ಹುಟ್ಟುಹಾಕುವುದು.


2. 1 ಮತ್ತು 2 ನೇ ತರಗತಿಯ ಮಕ್ಕಳ ಓದು, ಬರಹ ಮತ್ತು ಆರಂಭಿಕ ಗಣಿತದ ಅರ್ಥಪೂರ್ಣ ಕಲಿಕಾ ಪ್ರಕ್ರಿಯೆಯ ಅಗತ್ಯತೆಯ ಸಂವೇದನಾಶೀಲತೆಯನ್ನು ಸೃಷ್ಠಿಸುವುದು.

3. ಓದು, ಬರಹ ಮತ್ತು ಆರಂಭಿಕ ಗಣಿತದ ಸಂಬAಧಿಸಿದ ಕಲಿಕಾ ಶಾಸ್ತçದಲ್ಲಿ ಪರಿಣಿತ ಶಿಕ್ಷಕರ ಹಾಗೂ ಸಂಪನ್ಮೂಲ ವ್ಯಕ್ತಿಗಳ ಗುಂಪುಗಳನ್ನು ಸೃಷ್ಠಿಸುವುದು.

4. ಓದು, ಬರಹ ಮತ್ತು ಆರಂಭಿಕ ಗಣಿತದ ಕಲಿಕೆಗೆ ಪೂರಕವಾದ ಮತ್ತು ಕ್ರಿಯಾಶೀಲವಾದ ಶಾಲಾ ಹಾಗೂ ತರಗತಿ ವಾತಾವರಣ ವನ್ನು ಸೃಷ್ಠಿಸುವುದು.

ಅರ್ಥಗ್ರಹಿಕೆಯೊಂದಿಗೆ ಪ್ರಾರಂಭಿಕ ಓದು ಮತ್ತು ಬರಹ ಮತ್ತು 2) ಪ್ರಾರಂಭಿಕ ಗಣಿತ ಅಧ್ಯಯನ ಕಾರ್ಯಕ್ರಮದ ಘಟಕಗಳು:
ಓದುವ, ಬರೆಯುವ, ಮಾತನಾಡುವ ಮತ್ತು ವ್ಯವಹರಿಸುವ ಸನ್ನಿವೇಶಗಳು ಅರ್ಥಪೂರ್ಣ ವಾಗಬೇಕಾದರೆ
ಎ) ಪಠ್ಯವಸ್ತು
ಬಿ) ಓದುವವರು ಮತ್ತು
ಸಿ) ಸಂದರ್ಭ
ಈ ಮೂರೂ ಅಂಶಗಳು ಬಹುಮುಖ್ಯ. ಅದೇ ರೀತಿ ಓದುಗರು ಸಮಸ್ಯೆ ಪರಿಹರಿಸಬೇಕಾದ ಪ್ರಸಂಗವನ್ನು ಎದುರಿಸಿದಾಗ ಸಂಖ್ಯೆಗಳು ಮತ್ತು ಸ್ಥಾನದ ಸರಿಯಾದ ತಿಳುವಳಿಕೆ ಮೂಡುತ್ತದೆ. ಈ ಎಲ್ಲಾ ಅಂಶಗಳನ್ನು ಸಂಯೋಜಿಸಿ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಈ ಕೆಳಕಂಡ ಘಟಕಗಳನ್ನು ರಚಿಸಲಾಗಿದೆ:

ಎ) ವ್ಯವಸ್ಥಾ ಹಂತದ ಘಟಕಗಳು:
1. ಶೈಕ್ಷಣಿಕ ಪ್ರಾಧಿಕಾರದಿಂದ ವಿನ್ಯಾಸ, ಪಠ್ಯವಸ್ತು ಮತ್ತು ಸಾಹಿತ್ಯ ಅಭಿವೃದ್ಧಿ

2. ಬೋಧನಾ ಮಾಧ್ಯಮದ ಕುರಿತು ರಾಜ್ಯ ಹಂತದ ನೀತಿಶಾಸ್ತçದ ಸ್ಪಷ್ಟತೆ.

3. ಅರ್ಥಗ್ರಹಿಕೆಯೊಂದಿಗೆ ಪ್ರಾರಂಭಿಕ ಓದು ಮತ್ತು ಬರಹ ಮತ್ತು ಪ್ರಾರಂಭಿಕ ಗಣಿತದ ಅಧ್ಯಯನ ಘಟಕಗಳ ಸಂಬಂಧ ಸೇವಾನಿರತ ಹಾಗೂ ಸೇವಾ ಪೂರ್ವ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

4. ಎಸ್.ಸಿ.ಇ.ಆರ್.ಟಿ, ಡಯಟ್‌ಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಶಿಕ್ಷಣತಜ್ಞರಿಂದ ಸಾಮರ್ಥ್ಯ ಅಭಿವೃದ್ಧಿ.

5. ನಿರ್ದೇಶಕರು(ಇಇ), ಡಿಇಓಗಳು, ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಶಿಕ್ಷಣ ಆಡಳಿತಗಾರರಿಂದ ಸಾಮರ್ಥ್ಯ ಅಭಿವೃದ್ಧಿ.

6. ಅರ್ಥಗ್ರಹಿಕೆಯೊಂದಿಗೆ ಪ್ರಾರಂಭಿಕ ಓದು ಮತ್ತು ಬರಹ ಮತ್ತು ಪ್ರಾರಂಭಿಕ ಗಣಿತದ ಅಧ್ಯಯನದ ಕುರಿತು ಮುಖ್ಯಶಿಕ್ಷಕರಿಗೆ ಸಾಮರ್ಥ್ಯ ಅಭಿವೃದ್ಧಿ.

7. ಶಾಲಾ ಅಭಿವೃದ್ಧಿ ಉಸ್ತುವಾರಿ ಸಮಿತಿಯ ಸಾಮರ್ಥ್ಯ ಅಭಿವೃದ್ಧಿ.

8. ಸ್ಥಳೀಯ ಭಾಷೆಯಲ್ಲಿ ಸರಳವಾದ, ಪ್ರಾದೇಶಿಕ ನಿರ್ದಿಷ್ಠ, ಆಸಕ್ತಿದಾಯಕ ಶ್ರೇಣೀಕೃತ ಮಕ್ಕಳ ಸಾಹಿತ್ಯ ಮತ್ತು ಗಣಿತದ ಸಂಪನ್ಮೂಲಗಳನ್ನು ರೂಪಿಸುವುದು.

9. ನಿಯಮಿತ ಅಂತರಗಳಲ್ಲಿ ಅರ್ಥಗ್ರಹಿಕೆಯೊಂದಿಗೆ ಪ್ರಾರಂಭಿಕ ಓದು ಮತ್ತು ಬರಹ ಮತ್ತು ಪ್ರಾರಂಭಿಕ ಗಣಿತದ ಅಧ್ಯಯನದ ಕುರಿತು ಸಂಶೋಧನೆ ಮತ್ತು ಮೌಲ್ಯಮಾಪನ ಮತ್ತು ಆವರ್ತಕ ವಿಧಾನದಲ್ಲಿ ಕಾರ್ಯಕ್ರಮದ ವಿಮರ್ಶೆ.


ಬಿ) ಶಾಲೆ-ತರಗತಿ ಹಂತದ ಘಟಕಗಳು:

1. ಕಲಿಕೆಯ ವಾತವರಣ:


1.1 ಬೋಧನಾ-ಕಲಿಕಾ ಸಮಯ:

- ವಾರ್ಷಿಕ 200 ಶಾಲಾ ಕಾರ್ಯ ನಿರ್ವಹಣಾ ಅವಧಿಗಳು.
- ವಾರ್ಷಿಕ 800 ಬೋಧನಾ ಅವಧಿಗಳಲ್ಲಿ ಭಾಷೆಗಾಗಿ 500 ಅವಧಿಗಳು ಮತ್ತು ಪ್ರಾರಂಭಿಕ ಗಣಿತ ಕಲಿಕೆಗಾಗಿ 300 ಅವಧಿಗಳು.
- ದಿನದ 04 ಬೋಧನಾ ಅವಧಿಗಳಲ್ಲಿ 2 1/2 ಗಂಟೆಗಳನ್ನು ಓದಲು ಮತ್ತು ಬರೆಯಲು ಹಾಗೂ 1 1/2 ಗಂಟೆಗಳನ್ನು ಪ್ರಾರಂಭಿಕ ಗಣಿತ ಕಲಿಕೆಗಾಗಿ ಮೀಸಲಿಡುವುದು.

1.2 ಶಿಕ್ಷಕರು:
- ವಿದ್ಯಾರ್ಥಿ ಶಿಕ್ಷಕರ ಅನುಪಾತ 30:1
- 1 ಮತ್ತು 2ನೇ ತರಗತಿಗಳಿಗೆ ಒಬ್ಬರು ಶಿಕ್ಷಕರನ್ನು ಮೀಸಲಿಡುವುದು.
- ಶಿಕ್ಷಕರ ಹಾಜರಿ ಶೇ.95 ರಷ್ಟು ಇರುವಂತೆ ನೋಡಿಕೊಳ್ಳುವುದು.
- ಸಿದ್ಧತೆ ಮತ್ತು ಬೋಧನೆ ಸೇರಿ ವಾರದಲ್ಲಿ 45 ಗಂಟೆಗಳು ಶಿಕ್ಷಕರ ಕಾರ್ಯ ನಿರ್ವಹಿಸುವುದು.

1.3 ವಿದ್ಯಾರ್ಥಿಗಳು:
- ವಿದ್ಯಾರ್ಥಿಗಳ ಹಾಜರಾತಿಯನ್ನು ಕನಿಷ್ಠ ಶೇ. 75 ರಷ್ಟು ಸಾಧಿಸುವುದು.
- ಕಲಿಕಾ ಅನುಭವಗಳ ದೃಢೀಕರಣದ ಮೂಲಕ ಆತ್ಮ ವಿಶ್ವಾಸ ಮತ್ತು ಸ್ವ-ಚಿತ್ರ ಅಭಿವೃದ್ಧಿಗೆ ನೆರವಾಗುವುದು.

1.4 ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿ:
- ಅರ್ಥಗ್ರಹಿಕೆಯೊಂದಿಗೆ ಪ್ರಾರಂಭಿಕ ಓದು ಮತ್ತು ಬರಹದ ವಿಷಯದ ಕುರಿತಂತೆ ಶಿಕ್ಷಕರಿಗೆ ತರಬೇತಿ ನೀಡುವುದು.
- 1 ರಿಂದ 3 ನೇ ತರಗತಿಯ ಪ್ರಾರಂಭಿಕ ಗಣಿತ ವಿಷಯದ ಕುರಿತು ಶಿಕ್ಷಕರಿಗೆ ತರಬೇತಿ ನೀಡುವುದು.

1.5 ಶಿಕ್ಷಕರ ಮಾರ್ಗದರ್ಶನ ಮತ್ತು ಬೆಂಬಲ ವ್ಯವಸ್ಥೆ:
- ಶಿಕ್ಷಕರಿಗೆ ಅಭ್ಯಾಸ ಮತ್ತು ಪ್ರಾತ್ಯಕ್ಷಿಕೆಗಳಿಗೆ ಅವಕಾಶ ನೀಡುವುದು.
- ಸಂಪನ್ಮೂಲ ವ್ಯಕ್ತಿಗಳಿಂದ ಶೈಕ್ಷಣಿಕ ಬೆಂಬಲ.
- ಕ್ಲಸ್ಟರ್ ಸಮಾಲೋಚನ ಸಭೆಗಳು.
- ಸಂಪನ್ಮೂಲ­ಗಳ ಪೂರೈಕೆ. ’

1.6 ತರಗತಿ ಸ್ಥಿತಿ:

1.6.1 ಭೌತಿಕ ಸ್ಥಿತಿ.

- ಓದಲು ಬರೆಯಲು ಪೂರಕವಾದ, ಸರಾಗ ಗಾಳಿಬೆಳಕು, ಆಸನ ವ್ಯವಸ್ಥೆ ಇರುವ ಕೊಠಡಿಗಳನ್ನು ಒದಗಿಸುವುದು.
- ಕಪ್ಪು ಹಲಗೆ, ಚಟುವಟಿಕೆ ಮೂಲೆ, ಓದುವ ಮೂಲೆ, ಅಭಿವ್ಯಕ್ತಿ ಬೋರ್ಡ್ಗಳಿಗೆ ಅವಕಾಶ.

1.6.2 ಮುದ್ರಣಭರಿತ ಚಿತ್ರಗಳಿಂದ ಕೂಡಿದ ವಾತವರಣ.
- ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ ಪೂರೈಕೆ.
- ಮಕ್ಕಳ ಸಾಹಿತ್ಯ ಪ್ರದರ್ಶನ, ಬರೆದ ಚಿತ್ರಗಳಿಗೆ, ಫೋಟೋಗಳು. ಬರ್ತ್ಡೇ ಚಾರ್ಟ್ ಇತ್ಯಾದಿ ಅಭಿವ್ಯಕ್ತಿಗಳಿಗೆ ಮುಕ್ತ ಅವಕಾಶ.

1.6.3 ಧನಾತ್ಮಕ ಶಾಲಾ ಸಾಮಾಜಿಕ ಪರಿಸರ
- ಶಾಲೆಯಲ್ಲಿ ಭಾವನಾತ್ಮಕ, ಪ್ರೀತಿಪೂರ್ವಕ, ಸ್ಪಂದನಾಶೀಲ, ವಾತಾವರಣ ಸೃಷ್ಟಿಸುವುದು.
- ಭಯರಹಿತವಾದ ಮತ್ತು ಪಕ್ಷಪಾತರಹಿತ ಶಿಶು ಸ್ನೇಹಿ ವಾತಾವರಣ.

2. ತರಗತಿ ಚಲನವಲನವನ್ನು ಪ್ರೇರೇಪಿಸುವುದು.
- ಭಾಷಾ ಕಲಿಕೆಯನ್ನು ಉತ್ತೇಜಿಸುವುದು.
- ಭಾಷಾ ಕಲಿಕೆಯನ್ನು ತರಗತಿ ವಾತಾವರಣ ಮತ್ತು ಸಮುದಾಯದ ಜೊತೆಗೆ ಸಂಪರ್ಕಿಸುವುದು.
- ತರಗತಿಗಳಲ್ಲಿ ಮಕ್ಕಳು ಭಯರಹಿತರಾಗಿ, ಓಡಾಡುತ್ತಾ, ಅಭಿವ್ಯಕ್ತಿಸುತ್ತಾ ಮುಕ್ತವಾಗಿ ಕಲಿಯಲು ಅವಕಾಶ ಮಾಡಿಕೊಡುವುದು.
- ಚಟುವಟಿಕೆ ಆಧಾರಿತ, ಚಿಂತನಶೀಲ ಆಚರಣಗಳುಳ್ಳ, ಚಿಂತನೆಗೆ ಹಚ್ಚುವಂತಹ, ಎಲ್ಲರನ್ನೂ ತೊಡಗಿಸಿಕೊಳ್ಳುವ ತರಗತಿ ಪ್ರಕ್ರಿಯೆಗಳನ್ನು ಆಯೋಜಿಸುವುದು.

3. ತರಗತಿ ಕೊಠಡಿಗಳನ್ನು ಸಮುದಾಯದೊಂದಿಗೆ ಜೋಡಿಸುವುದು.
- ಓದುವುದು ಮತ್ತು ಬರೆಯುವುದನ್ನು ಸಾಮುದಾಯಿಕ ಜೀವನ, ಆಚರಣೆಗಳು, ಹಬ್ಬಗಳು,
ಸ್ಥಳೀಯ ಸನ್ನಿವೇಶಗಳಿಗನುಗುಣವಾಗಿ ಜೋಡಿಸುವುದು.
- ಸಮುದಾಯದ ತೊಡಗಿಸಿಕೊಳ್ಳುವಿಕೆ, ಅಂಚೆ ಕಛೇರಿ, ಆರಕ್ಷಕ ಠಾಣೆ ಇತ್ಯಾದಿ ಭೇಟಿಗಳನ್ನು ಆಯೋಜಿಸುವುದು.

4. ಕಲಿಕೆಯ ಮೌಲ್ಯಮಾಪನ.
- ಪೋಷಕರಿಗೆ ಕಲಿಕಾ ಸೂಚಕಗಳ ಪರಿಚಯ
- ಸಾಧನಾ ಪರೀಕ್ಷೆಗಳನ್ನು ಆಯೋಜಿಸುವುದು.
- ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನಗಳನ್ನು ಆಯೋಜಿಸುವುದು.
- ಸಾಧನೆಗಳ ದಾಖಲೀಕರಣ ಮತ್ತು ಚೈಲ್ಡ್ ಪ್ರೊಫೈಲ್ ಇಡುವುದು.

5. ವ್ಯವಸ್ಥೆಯ ಮೇಲ್ವಿಚಾರಣೆ ಮಾಡುವುದು.
- ಉತ್ತಮ ಉಸ್ತುವಾರಿ ತಂತ್ರಗಳು.
- ಕ್ಯು ಎಂ ಟಿ ಸಾಧನಗಳ ಬಳಕೆ.
- ಶಿಕ್ಷಕರ ಸಾಮರ್ಥ್ಯ ಸೂಚಕಗಳ ಬಳಕೆ.
- ಕಲಿಕಾ ಸಾಧನ ಸಮೀಕ್ಷೆಗಳ ಅನುಷ್ಠಾನ.
















.................. END .....................