ಸರ್ಕಾರಿ ನೌಕರರ ಸೇವಾ ಪುಸ್ತಕ (S R) ನಿರ್ವಹಣೆ.
ಶಾಲಾ ಶಿಕ್ಷಕರು ಗುರುಸ್ಪಂದನಾ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಒಮ್ಮೆ ಓದಿಕೊಳ್ಳಿ. ಸೆಕ್ಷನ್ ಕ್ಲರ್ಕ್ ನಿಂದ ಯಾವ ಕಾಲಂನಲ್ಲಿ ಏನನ್ನು ನಮೂದಿಸಬೇಕು, ಹೇಗೆ ನಿರ್ವಹಣೆ ಎನ್ನುವ ಸಂಪೂರ್ಣ ಮಾಹಿತಿ ಇದೆ .
ಕೆ.ಸಿ.ಎಸ್.ಆರ್ ನಿಯಮ 396 ರಿಂದ 415 ರ ವರೆಗೆ ಸೇವಾವಹಿ ನಿರ್ವಹಣೆಯ ಬಗ್ಗೆ ವಿವರಿಸಿದೆ.
ಕರ್ನಾಟಕ ನಾಗರಿಕ ಸೇವಾ ನಿಯಮಗಳು 1956ರ ನಿಯಮ 397ರಂತೆ ನಮೂನೆ 18 ರಲ್ಲಿ ಪ್ರತಿ ಸರ್ಕಾರಿ ನೌಕರರಿಗೂ ಸೇವಾ ಪುಸ್ತಕ ನಿರ್ವಹಿಸಬೇಕು. ಪ್ರತಿ ಸರ್ಕಾರಿ ನೌಕರರ ಮೊದಲನೇ ನೇಮಕಾತಿ ಸಮಯದಲ್ಲಿ ಸೇವಾವಹಿಯನ್ನು ತೆರೆಯಲಾಗುತ್ತದೆ. ಸರ್ಕಾರಿ ನೌಕರನು ನೇಮಕಗೊಂಡ ಕೂಡಲೇ, ವೇತನ ಬಟವಾಡೆ ಅಧಿಕಾರಿಯು ಕಛೇರಿಯ ಅಥವಾ ಶಾಲೆಯ ಸಾದಿಲ್ವಾರು ಹಣದಲ್ಲಿ ಸೇವಾ ಪುಸ್ತಕವನ್ನು ಖರೀದಿಸಿ ನಿರ್ವಹಿಸಬೇಕಾಗುತ್ತದೆ. ಪರಿಷ್ಕೃತ ಸೇವಾವಹಿ ಆರು ಭಾಗಗಳನ್ನು ಹೊಂದಿದೆ.
ಭಾಗ 1:~ ರಲ್ಲಿ ಸರ್ಕಾರಿ ನೌಕರನ ವ್ಯಕ್ತಿ ವಿವರ, ಸ್ವಂತ ವಾಸಸ್ಥಳ, ವೈಯಕ್ತಿಕ ಗುರುತಿನ ಚಿಹ್ನೆ, ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ಇಲಾಖಾ ಪರೀಕ್ಷೆಗಳ ವಿವರ ನಮೂದಿಸಿ ಭಾವಚಿತ್ರ ಅಂಟಿಸಿ, ಸರ್ಕಾರಿ ನೌಕರನ ಸಹಿ ಪಡೆದು ಬಟವಾಡೆ ಅಧಿಕಾರಿಗಳು ದೃಢೀಕರಿಸಬೇಕು.
ಭಾಗ 2:~ ರಲ್ಲಿ, ಮೊದಲ ಏಳು ಪ್ರಮಾಣ ಪತ್ರಗಳನ್ನು ನೌಕರನ ಮೊದಲ ನೇಮಕಾತಿ ಸಮಯದಲ್ಲಿ ಮತ್ತು ಉಳಿದ ನಾಲ್ಕು ಪ್ರಮಾಣ ಪತ್ರಗಳನ್ನು ಸಮುಚಿತ ಹಂತಗಳಲ್ಲಿ ದಾಖಲಿಸಬೇಕು. ಮುಖ್ಯವಾಗಿ ರಹಸ್ಯ ಪಾಲನೆ ಪ್ರಮಾಣವಚನ ಕುರಿತು 4ನೇ ಬಾಬ್ರನ್ನು ಪ್ರಮಾಣೀಕರಿಸುವ ಮೊದಲು ಕಛೇರಿ ಮುಖ್ಯಸ್ಥರು ಸರ್ಕಾರಿ ರಹಸ್ಯಗಳ ಅಧಿನಿಯಮ ಮತ್ತು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 1966ರ ಬಗ್ಗೆ ತಿಳುವಳಿಕೆಯನ್ನು ನೀಡಬೇಕು. ಸರ್ಕಾರಿ ನೌಕರನ ಇಲಾಖೆ ಮತ್ತು ಭಾಷಾ ಪರೀಕ್ಷೆಗಳ ತೇರ್ಗಡೆ ಬಗ್ಗೆ ಮಾಹಿತಿ ನೀಡಬೇಕು. ಉನ್ನತ ವ್ಯಾಸಂಗದ ವಿವರಗಳನ್ನು ನಮೂದಿಸಿ ದೃಢೀಕರಿಸಬೇಕು. ಘೋಷಣೆಗಳು, ನಾಮನಿರ್ದೇಶನಗಳು ಮತ್ತು ಜಿ.ಪಿ.ಎಫ್., ಕೆ.ಜಿ.ಐ.ಡಿ., ಡಿ.ಸಿ.ಆರ್.ಜಿ. ಮತ್ತು ಕುಟುಂಬ ನಿವೃತ್ತಿವೇತನ ಇವುಗಳಿಗೆ ಮಾಡಿದ ನಾಮನಿರ್ದೇಶನಗಳು ಹಾಗೂ ಇವುಗಳಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದ ಯೋಗ್ಯತಾ ಪತ್ರ, ಪ್ರಮಾಣ ಪತ್ರಗಳನ್ನು ನಮೂದಿಸಿ ದಾಖಲಿಸಬೇಕು.
ಭಾಗ :~3 ರಲ್ಲಿ ಹಿಂದಿನ ಅರ್ಹತಾ ಸೇವೆ ಅಥವಾ ಅನ್ಯ ಸೇವೆ ಇದ್ದಲ್ಲಿ ವಿವರ ನಮೂದಿಸುವುದು.
ಭಾಗ-3'ಬಿ' ಯಲ್ಲಿ ಹಿಂದಿನ ಸೇವೆಯನ್ನು 'ಅರ್ಹತಾ ಸೇವೆ' ಎಂದು ಯಾವ ಉದ್ದೇಶಕ್ಕಾಗಿ ಅಂಗೀಕರಿಸಲಾಗಿದೆ ಎಂಬುದನ್ನು ನಿರ್ದಿಷ್ಟ ಪಡಿಸಬೇಕು. ಉದಾ: ರಜೆ, ವೇತನ, ನಿವೃತ್ತಿ ವೇತನ,
ಭಾಗ 4:~ ರಲ್ಲಿ ನೇಮಕಾತಿ ಸಮಯದಲ್ಲಿ ಮತ್ತು ಆನಂತರದ ಹುದ್ದೆ, ಕಛೇರಿ ಸ್ಥಳ, ವೇತನಶ್ರೇಣಿ ಅಥವಾ ನೇಮಕಾತಿ ಸ್ವರೂಪದಲ್ಲಿ ಬದಲಾವಣೆ ಗಳನ್ನು ಉಂಟುಮಾಡುವ ಘಟನೆ ಗಳನ್ನು ನಮೂದಿಸಬೇಕು. ನೇಮಕಾತಿ ಖಾಯಂಗೊಳಿಸುವಿಕೆ, ಮುಂಬಡ್ತಿ, ಹಿಂಬಡ್ತಿ, ವರ್ಗಾವಣೆ, ವೇತನ ಬಡ್ತಿ, ರಜೆ, ಅಮಾನತ್ತು, ನಿವೃತ್ತಿ, ಸೇವೆಯಿಂದ ಬಿಡುಗಡೆ ಅಥವಾ ವಜಾಗೊಳಿಸಿದ ವಿವರಗಳನ್ನು ನಮೂದಿಸುವುದು. ಬಹುಮಾನ ಪ್ರಶಂಸೆ, ದಂಡನೆ ಅಥವಾ ನಿಂದನೆಯ ಸ್ವರೂಪ ಹಾಗೂ ಇವುಗಳಿಗೆ ಸಂಬಂಧಿಸಿದ ಮಂಜೂರಾತಿಯ ಉಲ್ಲೇಖ, ಆದೇಶ ಸಂಖ್ಯೆ, ದಿನಾಂಕ ಮತ್ತು ಅಧಿಕಾರದ ಮಾಹಿತಿಗಳನ್ನು ನಮೂದಿಸಬೇಕು. ಪ್ರತಿ ವರ್ಷ ಮಾರ್ಚ್ ಅಂತ್ಯಕ್ಕೆ ಸೇವಾ ವಿವರ ನಮೂದಿಸಿ, ವಾರ್ಷಿಕ ಪರಿಶೀಲನೆ ಮಾಡಿ ಹತ್ತನೇ ಕಾಲಂನಲ್ಲಿ ಸಂಬಂಧಿಸಿದ ಸರ್ಕಾರಿ ನೌಕರರ ಸಹಿಯನ್ನು ಏಪ್ರಿಲ್ ಅಂತ್ಯದೊಳಗೆ ಪಡೆಯುವುದು.
ಭಾಗ 5:~ ರಲ್ಲಿ ಕರ್ತವ್ಯ ನಿರ್ವಹಿಸಿದ ತಿಂಗಳು, ಲಭ್ಯವಾದ ಗಳಿಕೆ ರಜೆ, ಅರ್ಧವೇತನ ರಜೆ, ಪರಿವರ್ತಿತ ರಜೆಗಳು, ಜಮೆಯಲ್ಲಿರುವ ಒಟ್ಟು ರಜೆಗಳು, ತೆಗೆದುಕೊಂಡ ರಜೆಗಳು, ಪೂರ್ಣಗೊಳಿಸಿದ ಸೇವಾ ವರ್ಷಗಳು, ಪರಿವರ್ತಿಸಿದ ರಜೆದಿನಗಳ ವಿವರಗಳನ್ನು ನಮೂದಿಸಿ ದೃಢೀಕರಿಸಬೇಕು.
ಭಾಗ 6:~ ರಲ್ಲಿ ಸರ್ಕಾರಿ ನೌಕರನು ಉಪಯೋಗಿಸಿಕೊಂಡ ರಜೆ ಪ್ರಯಾಣ ರಿಯಾಯಿತಿಯ ವಿವರ ಮತ್ತು ಇತರ ವಿಶೇಷ ಮಾಹಿತಿಗಳನ್ನು ನಮೂದಿಸಿ ದೃಢೀಕರಿಸಬೇಕು.
1, ಪ್ರತಿ ವರ್ಷ ಸೇವಾಪುಸ್ತಕವನ್ನು ಪರಿಶೀಲಿಸಿ ದೃಢೀಕರಿಸಬೇಕೇ?
ಹೌದು. ಪ್ರತಿವರ್ಷ ಮಾರ್ಚ್ 31 ಕ್ಕೆ, ಕಛೇರಿಯ ಅಥವಾ ಶಾಲೆಯ ಮುಖ್ಯಸ್ಥರು ತಮ್ಮ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಸೇವಾ ವಹಿಯಲ್ಲಿ ಅಗತ್ಯ ನಮೂದುಗಳನ್ನು ದಾಖಲಿಸಿ ದೃಢೀಕರಿಸಬೇಕು. ಅಲ್ಲದೆ, ಸೇವಾ ವಿವರಗಳನ್ನು ಅಗತ್ಯ ದಾಖಲೆಗಳೊಂದಿಗೆ ತಾಳೆ ನೋಡಿ ಸರಿ ಇದೆ ಎಂದು ಪ್ರತೀ ವರ್ಷ ಏಪ್ರಿಲ್ ಅಂತ್ಯದೊಳಗೆ ವಾರ್ಷಿಕ ಪರಿಶೀಲನೆ ಮಾಡಿ ದೃಢೀಕರಿಸುವುದು.
2, ಸೇವಾ ವಹಿಗಳನ್ನು ಯಾರು ನಿರ್ವಹಿಸಬೇಕು ?
ಪ್ರಾಥಮಿಕ ಶಾಲಾ ಶಿಕ್ಷಕರ, ಪದವೀಧರ ಮತ್ತು ಪದವೀಧರೇತರ ಮುಖ್ಯಶಿಕ್ಷಕರ, ಪದೋನ್ನತ ಮುಖ್ಯಶಿಕ್ಷಕರ ಸೇವಾವಹಿಗಳನ್ನು ಆಯಾ ಆಡಳಿತ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ವಹಿಸಬೇಕು ಹಾಗೂ ಕಾಲಕಾಲಕ್ಕೆ ಅಗತ್ಯ ಮಾಹಿತಿಗಳನ್ನು ನಮೂದಿಸಿ ದೃಢೀಕರಿಸಬೇಕು. ಪ್ರೌಢಶಾಲೆಗಳಲ್ಲಿ ಆಯಾ ಶಾಲಾ ಮುಖ್ಯಶಿಕ್ಷಕರು ಅಥವಾ ಉಪಪ್ರಾಂಶುಪಾಲರು ಸೇವಾವಹಿಯನ್ನು ನಿರ್ವಹಿಸತಕ್ಕದ್ದು.
3, ಈ ವರ್ಷದ ಯಾವ ಯಾವ ದಿನಾಂಕದಂದು ರಜೆಯ ವಿವರಗಳನ್ನು ಸೇವಾ ಪುಸ್ತಕದಲ್ಲಿ ದಾಖಲಿಸಬೇಕು?
ಪ್ರತಿ ವರ್ಷ ಜನವರಿ ಮತ್ತು ಜುಲೈ 1ರಂದು ಪ್ರತಿ ಅರ್ಧ ವರ್ಷಕ್ಕೊಮ್ಮೆ ಮುಂಗಡವಾಗಿ ರಜೆಯನ್ನು ದಾಖಲಿಸಬೇಕು. ಅದನ್ನು ಒಟ್ಟು ಲೆಕ್ಕಕ್ಕೆ ದಾಖಲಿಸಿ ಒಟ್ಟು ಲಭ್ಯವಿರುವ ರಜೆ ದಿನಗಳನ್ನು ದೃಢೀಕರಿಸಬೇಕು.
ಭಾಗ-5 ರಲ್ಲಿ
ಶಿಕ್ಷಕರಾದಲ್ಲಿ 01/07/1985 ರಿಂದ ಜಾರಿಗೆ ಬರುವಂತೆ ಪ್ರತಿ ಅರ್ಧ ವರ್ಷಕ್ಕೆ 5 ದಿನಗಳು ಗಳಿಕೆ ರಜೆ (ಪ್ರೌಢಶಾಲಾ ಮುಖ್ಯಶಿಕ್ಷಕರನ್ನು ಹೊರತು ಪಡಿಸಿ) ಗಳನ್ನು ನಮೂದಿಸಬೇಕು.
ಬೋಧಕೇತರ ಸಿಬ್ಬಂದಿಗೆ ಜನವರಿ ಮತ್ತು ಜುಲೈ 1 ರಂದು ಅರ್ಧವರ್ಷಕ್ಕೆ 15 ದಿನಗಳಂತೆ, ಒಂದು ವರ್ಷಕ್ಕೆ ಒಟ್ಟು 30 ದಿನಗಳ ಗಳಿಕೆ ರಜೆ ಹಾಗೂ ಒಂದು ವರ್ಷಕ್ಕೆ 20 ದಿನಗಳ ಅರ್ಧವೇತನ ರಜೆಯನ್ನು ಸೇವಾಪುಸ್ತಕದಲ್ಲಿ ನಮೂದಿಸಿ, ಲೆಕ್ಕಕ್ಕೆ ಜಮಾ ಮಾಡತಕ್ಕದ್ದು.
4, ಸರ್ಕಾರಿ ನೌಕರರ ಸೇವಾಪುಸ್ತಕವನ್ನು ಮಹಾಲೇಖಪಾಲರ ಬಳಿಗೆ ಪರಿಶೀಲನೆಗಾಗಿ ಯಾವಾಗ ಸಲ್ಲಿಸಬೇಕು ?
ಸರ್ಕಾರಿ ನೌಕರನು 25 ವರ್ಷಗಳ ಸೇವೆಯನ್ನು ಪೂರೈಸಿದಾಗ ಅಥವಾ ನಿವೃತ್ತಿಗೆ 5ವರ್ಷ ಬಾಕಿ ಇರುವಾಗ ಸೇವಾ ಪುಸ್ತಕವನ್ನು ಪರಿಶೀಲನೆ ಹಾಗೂ ಮುಂಗಡ ತಪಾಸಣೆಗಾಗಿ ಮಹಾಲೇಖಪಾಲರ ಕಛೇರಿಗೆ ಸಂಬಂಧಿಸಿದ ಕಛೇರಿ ಮುಖ್ಯಸ್ಥರು ಸಲ್ಲಿಸಬೇಕು [ಕರ್ನಾಟಕ ನಾಗರಿಕ ಸೇವಾ ನಿಯಮ 329(ಸಿ)
5. ಶ್ರೀಮತಿ ಸಂಪಗಮ್ಮ ಎನ್ನುವ ಶಿಕ್ಷಕಿಯವರು ನಿವೃತ್ತಿ ಹೊಂದುವ ವರ್ಷದಲ್ಲಿ ಗಳಿಕೆ ರಜೆಯ ನಗದೀಕರಣಕ್ಕಾಗಿ ಅರ್ಜಿಯನ್ನು ಸಲ್ಲಿಸಿದರು. ನಿಮ್ಮ ಹಕ್ಕಿನಲ್ಲಿ ಗಳಿಕೆ ರಜೆಗಳೇ ಇಲ್ಲ ಎಂದು ಕಛೇರಿಯವರು ತಿಳಿಸಿದರು. ನನ್ನ ಹಕ್ಕಿನಲ್ಲಿ ಇನ್ನೂ 60 ಗಳಿಕೆ ರಜೆ ಇರಬೇಕಿತ್ತು ಎಂಬುದೇ ಅವರ ತೊಳಲಾಟ. ಇವರ ಈ ಸ್ಥಿತಿ ನಮಗೆ ಬರಬಾರದು ಎಂದರೆ ನಮ್ಮ ಸೇವಾವಹಿಯನ್ನು ಪ್ರತಿ ವರ್ಷ ನೋಡಬೇಕಾಗುತ್ತದೆ.
6, ಶಿಕ್ಷಕರಾದ ನಮಗೆ ಸೇವಾವಹಿಯನ್ನು ನೋಡುವ ಅವಕಾಶಗಳು ಇಲ್ಲವೇ?
ಕೆ.ಸಿ.ಎಸ್.ಆರ್ ನಿಯಮ 407 ಹಾಗೂ ಸುತ್ತೋಲೆ ಸಂ ಎಫ್.ಡಿ.ಎಸ್.ಎಲ್.-5 ಸಿ.ಪಿ.ಪಿ.73 ದಿನಾಂಕ:- 24/12/1973ರ ಪ್ರಕಾರ ತನ್ನ ಆಡಳಿತ ನಿಯಂತ್ರಣದಲ್ಲಿರುವ ಸರ್ಕಾರಿ ನೌಕರರಿಗೆ ಪ್ರತಿ ವರ್ಷವೂ ಸೇವಾಪುಸ್ತಕಗಳನ್ನು ತೋರಿಸಿ, ಅವುಗಳಲ್ಲಿ ಅವರಿಂದ ಅವರ ಸೇವಾಪುಸ್ತಕಗಳಲ್ಲಿ ನಮೂದಿಸಿರುವ ಮಾಹಿತಿಯನ್ನು ಪರಿಶೀಲಿಸಿದ ಬಗ್ಗೆ ಸಹಿಗಳನ್ನು ಪಡೆದುಕೊಳ್ಳುವುದು, ಕಛೇರಿಯ ಪ್ರತಿಯೊಬ್ಬ ಮುಖ್ಯಾಧಿಕಾರಿಯ ಕರ್ತವ್ಯವಾಗಿರುತ್ತದೆ. ಈ ನಿಯಮದ ಅನ್ವಯ ಪ್ರತಿಯೊಬ್ಬ ಸರ್ಕಾರಿ ನೌಕರನು ಅವರ ಸೇವಾವಹಿಯ ನಮೂದುಗಳನ್ನು ಪ್ರತಿ ವರ್ಷವೂ ನೋಡಬಹುದು.
7, ಸೇವಾವಹಿಯನ್ನು ನಕಲು ಪ್ರತಿ ಮಾಡಿಸಿಕೊಳ್ಳಬಹುದೇ?
ಸರ್ಕಾರಿ ಆದೇಶ ಸಂಖ್ಯೆ ಒ.ಎಮ್. ನಂ: ಜಿ.ಎ.ಡಿ. 64 ಮಾರ್ಚ್ 71 ದಿನಾಂಕ:- 19/01/02 ರ ಅನ್ವಯ ಸೇವಾವಹಿಯ ನಕಲುಪ್ರತಿ ಮಾಡಿಕೊಳ್ಳುವ ಅವಕಾಶವಿದೆ.
............. END ...............